ರಾಜಗೋಪಾಲಾಚಾರಿ, ಚಕ್ರವರ್ತಿ 
1878-1972. ಸ್ವತಂತ್ರ ಭಾರತದ ಎರಡನೆಯ ಗವರ್ನರ್ ಜನರಲ್; ವಿದ್ವಾಂಸ. ಶ್ರೇಷ್ಠ ರಾಜಕಾರಣಿ ಹಾಗೂ ಪ್ರಥಮ ಭಾರತೀಯ ಗವರ್ನರ್ ಜನರಲ್. ಸಿಂಗಾರಮ್ಮಾಳ್-ನಲ್ಲಾಂ ಚಕ್ರವರ್ತಿ ಅಯ್ಯಂಗಾರ್ ಈ ದಂಪತಿಗಳ ಮೂರನೆಯ ಮಗನಾ 1878 ಡಿಸೆಂಬರ್ 9 ರಂದು ಜನನ, ರಾಜಾಜಿಯವರ ತಂದೆ ಸೇಲಂ ಜಿಲ್ಲೆಯ ಹೊಸೂರು ತಾಲ್ಲೂಕಿನ ತೊರಪಳ್ಳಿ ಗ್ರಾಮದ ಗ್ರಾಮಾಧಿಕಾರಿಯಾಗಿದ್ದರು. ಸಂಪ್ರದಾಯಸ್ಥ ವೈಷ್ಣವ ಕುಟುಂಬದಲ್ಲಿ ಜನಿಸಿದ ರಾಜಗೋಪಾಲಾಚಾರಿ ತಮ್ಮ ಓದು ಮತ್ತು ಅನುಭವಗಳಿಂದ ಶ್ರೇಷ್ಠ ವಿಚಾರವಾದಿಗಳಾಗಿ ರಾಜಾಜಿ ಎಂದೇ ಹೆಸರು ಪಡೆದರು. ಇವರ ಕುಟುಂಬದ ಅನೇಕ ಹಿರಿಯರು ಆಗಿನ ಮೈಸೂರು ಸಂಸ್ಥಾನದ ಆಸ್ಥಾನ ವಿದ್ವಾಂಸರಾಗಿದ್ದರು.

ಹುಟ್ಟಿದ ಹಳ್ಳಿಯಲ್ಲಿ ಅಕ್ಷರಾಭ್ಯಾಸ ಮಾಡಿದ ರಾಜಾಜಿಯವರು ಹೊಸೂರಿನಲ್ಲಿ ಇಂಗ್ಲಿಷ್ ಪ್ರಥಮಿಕ ಶಿಕ್ಷಣ ಪಡೆದು ಪ್ರೌಢಶಾಲಾ ಶಿಕ್ಷಣಕ್ಕಾಗಿ ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ಬೆಂಗಳೂರಿಗೆ ಬಂದರು. ಮುಂದೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರಿ ತಮ್ಮ ಹದಿನೆಂಟನೆಯ ವರ್ಷದಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜು ಸೇರಿದರು. ಅನಂತರ ಎರಡು ವರ್ಷ ಕಾನೂನುವ್ಯಾಸಂಗ ಮುಗಿಸಿ ವಕೀಲಿ ವೃತ್ತಿಯನ್ನು ಅಲ್ಲೇ ಪ್ರಾರಂಭಿಸಿದರು.

ರಾಜಾಜಿ 1900ರಲ್ಲಿ ಅಲಮೇಲು ಮಂಗಮ್ಮಾಳ್ ಅವರನ್ನು ವಿವಾಹವಾದರು. ಆದರೆ ಇವರ ಪತ್ನಿ 1917ರಲ್ಲಿ ತೀರಿಕೊಂಡಳು. ರಾಜಾಜಿ ಓದು ಮತ್ತು ಜನಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಮಹಾಭಾರತ, ಗೀತೆ, ಬೈಬಲ್ ರಾಜಾಜಿಯವರಿಗೆ ಪ್ರಿಯವಾದ ಗ್ರಂಥಗಳಾಗಿದ್ದವು. ಜೊತೆಗೆ ಷೇಕ್‍ಸ್ಪಿಯರ್, ವಾಲ್ಟರ್ ಸ್ಕಾಟ್, ಟಾಲ್‍ಸ್ಟಾಯ್, ಥೋರೊನ `ಸಿವಿಲ್ ಡಿಸ್ಸೊಬಿಡಿಯನ್ಸ್ ರಾಜಾಜಿಯವರನ್ನು ಸೆಳೆಯಿತು. ಇದರಿಂದಾಗಿ ಆಗಿನ ಅಸಹಕಾರ ಚಳುವಳಿಗೆ ಓಗೊಟ್ಟರು. ಕಾಲೇಜಿನಲ್ಲಿದ್ದಾಗಲೇ ರಾಜಾಜಿಯವರು ಟಯಟ್ ಎಂಬ ಆಂಗ್ಲ ಪ್ರಾಧ್ಯಾಪಕರಿಂದ ಪ್ರಭಾವಿತರಾಗಿದ್ದರಲ್ಲದೇ ಸಿ. ವಿಜಯ ರಾಘವಾಚಾರ್, ಅನಿ ಬೆಸೆಂಟ್ ಮತ್ತು ಸರೋಜಿನಿ ನಾಯ್ಡು ಮುಂತಾದವರು ರಾಜಾಜಿಯವರ ವ್ಯಕ್ತಿತ್ವದ ಮೇಲೆ ವಿಶೇಷ ಪ್ರಭಾವ ಬೀರಿದವರೆನ್ನಬಹುದು. ಗಾಂಧಿಜಿಯವರ ಜೊತೆ ಅನೇಕ ಭಿನ್ನಾಭಿಪ್ರಾಯಗಳಿದ್ದರೂ ಜೀವನಪರ್ಯಂತ ಅವರನ್ನು ತಮ್ಮ ಮಾರ್ಗದರ್ಶಕರಾಗಿ ರಾಜಾಜಿ ಸ್ವೀಕರಿಸಿದರು. ಕಲ್ಕತ್ತದಲ್ಲಿ 1906ರಲ್ಲಿ ದಾದಾಭಾಯಿ ನವರೋಜಿಯವರು ಕಾಂಗ್ರೆಸ್ ಅಧ್ಯಕ್ಷ ಪೀಠದಿಂದ ಮಾಡಿದ ಭಾಷಣದಿಂದ ಸ್ಪೂರ್ತಿ ಪಡೆದ ರಾಜಾಜಿ ಕಾಂಗ್ರೆಸ್ ಕಡೆಗೆ ಆಕರ್ಷಿತರಾದರು. 1919ರಲ್ಲಿ ರೌಲಟ್ ಕಾಯಿದೆ ಜಾರಿಗೆ ಬಂದು ಪ್ರತಿಭಟನೆಯ ಬೆಂಕಿಯಲ್ಲಿ ದೇಶ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ ಗಾಂಧೀಜಿಯವರನ್ನು ಮೊದಲ ಬಾರಿ ಭೇಟಿ ಮಾಡಿದರು. ಅಲ್ಲಿಂದ ಮುಂದೆ ಸ್ವಾತಂತ್ರ್ಯ ಚಳುವಳಿಯ ಮಂಚೂಣಿಯಲ್ಲಿ ರಾಜಾಜಿ ಒಬ್ಬರಾದರು. 

ರಾಜಾಜಿ ಭಾರತೀಯ ಸಮಾಜ ಮತ್ತು ಆರ್ಥಿಕ ವ್ಯವಸ್ಥೆಗಳ ಪ್ರತಿಪಾದಕರಾಗಿದ್ದರು. ಅಸ್ಪøಶ್ಯತೆಯ ವಿರುದ್ಧ ಅವಿರತ ಹೋರಾಟ ನಡೆಸಿದರು. ಇವರು 1939ರಲ್ಲಿ ಮದರಾಸಿನ ಮುಖ್ಯಮಂತ್ರಿಗಳಾಗಿದ್ದಾಗ ದೇವಾಲಯ ಪ್ರವೇಶ ಕಾನೂನನ್ನು ಜಾರಿಗೆ ತಂದರು. `ಧರ್ಮ, ಸಮಾಜ, ರಾಜಕೀಯ ಮತ್ತು ಆರ್ಥಿಕಸ್ಥಿತಿಗಳು ಒಂದನ್ನೊಂದು ಅವಲಂಬಿಸಿವೆ. ಧಾರ್ಮಿಕ ಮುಕ್ತವಾತಾವರಣ ಇರದಿದ್ದರೆ ಸಮಾಜಮುಕ್ತವಾಗಿರುವುದಿಲ್ಲ. ಸಮಾಜದಲ್ಲಿ ಮುಕ್ತ ಮತ್ತು ಸಮಾನತೆಯ ವಾತಾವರಣವಿರದಿದ್ದಲ್ಲಿ ರಾಜಕೀಯ ಮತ್ತು ಆರ್ಥಿಕ ಸ್ತರಗಳು ತಾವಾಗಿಯೇ ಹಿಂದುಳಿಯುತ್ತವೆ ಎಂಬುದು ರಾಜಾಜಿಯವರ ಅಭಿಪ್ರಾಯ. ರಾಜಾಜಿ ಪ್ರಾಚೀನ ಭಾರತದ ಜಾತಿ ಪದ್ಧತಿಯ ಬಗ್ಗೆ ಮೃದುಧೋರಣೆಯನ್ನು ಹೊಂದಿದ್ದರೂ ಆಧುನಿಕ ಸಂದರ್ಭದಲ್ಲಿ ವೃತ್ತಿ, ಶಿಕ್ಷಣ ಇತ್ಯಾದಿಗಳು ಜಾತಿಯ ಆಧಾರದ ಮೇಲೆ ರೂಪುಗೊಳ್ಳುವ ಬಗ್ಗೆ ಕಡು ವಿರೋಧಿಯಾಗಿದ್ದರು. ಗಂಡು ಹೆಣ್ಣು ತಮಗೆ ಇಷ್ಟವಾದವರನ್ನು ವರಿಸುವ ವಾತಾವರಣ ಸಮಾಜದಲ್ಲಿರಬೇಕೆಂದು ರಾಜಾಜಿಯವರ ಅಭಿಪ್ರಾಯ. ಇವರು ಸ್ವಾತಂತ್ರ್ಯ ಮತ್ತು ಸಮಾನತೆಗಳು ಉಗ್ರಪ್ರತಿಪಾದಕರಾಗಿದ್ದರೂ `ಕುಟುಂಬ ವ್ಯವಸ್ಥೆ ನಮ್ಮ ನಾಗರೀಕತೆಯ ಅಡಿಪಾಯವಾಗಿರುವುದರಿಂದ, ಅದರೊಳಗಿನ ಗಂಡು-ಹೆಣ್ಣಿನ ತಾರತಮ್ಯವನ್ನು ನಾಶಗೊಳಿಸಲಾಗದು ಎಂದು ನಂಬಿದ್ದರು.

ರಾಜಾಜಿಯವರು ಭಗವದ್ಗೀತೆಯ ಕರ್ಮಸಿದ್ದಾಂತದ ಕಟ್ಟಾ ಅನುಯಾಯಿ. ಹಿಂದೂ ಧರ್ಮದ ಬಗ್ಗೆ ಇವರು ಓದಿರುವುದಕ್ಕಿಂತ ತಾಯಿಯಿಂದ ಕಲಿತದ್ದೇ ಹೆಚ್ಚು. ಧಾರ್ಮಿಕ ನಂಬಿಕೆಗಳು ಉತ್ತಮ ನಡವಳಿಕೆಗಳನ್ನು ರೂಪಿಸಿಕೊಳ್ಳಲು ಬುನಾದಿ ಎಂದು ತಿಳಿದಿದ್ದರು. ಹಿಂದೂ ಧರ್ಮ ಇಂದಿಗೂ ಭಾರತದಲ್ಲಿ ಅರ್ಥ ಕಳೆದುಕೊಂಡಿಲ್ಲವೆಂದು ರಾಜಾಜಿ ಭಾವಿಸಿದ್ದರು. `ಹಿಂದೂ ಧರ್ಮ ಸಮಸ್ತ ಮಾನವ ಕುಲದ e್ಞÁನವನ್ನು e್ಞÁಪಕ ಪರಂಪರೆಯಲ್ಲಿಟ್ಟಿದೆ. ಅಗಾಧ ತಿಳಿವಳಿಕೆ, ಅನ್ಯಧರ್ಮ ಸಹಿಷ್ಣುತೆ, ಸತ್ಯಾನ್ವೇಷಣೆಗಳ ದೃಷ್ಟಿಯಲ್ಲಿ ಅದಕ್ಕೆ ಪರ್ಯಾಯವೇ ಇಲ್ಲ. ಆದರೆ ಅನೇಕ ಅರ್ಥಹೀನ, ಮೂಢಾಚರಣೆಗಳು ಈ ಧರ್ಮದಲ್ಲಿ ನುಸುಳಿವೆ; ಇವುಗಳನ್ನು ತ್ಯಜಿಸಬೇಕೇ ವಿನಃ ಧರ್ಮವನ್ನಲ್ಲ ಎಂಬುದು ರಾಜಾಜಿಯವರ ಅಭಿಪ್ರಾಯ.

ಕಾಂಗ್ರೆಸ್ಸಿನ ಮುಖ್ಯಮಂತ್ರಿಯಾಗಿ ಯಾವ ಅಂಧಾಭಿಮಾನ ಇಲ್ಲದೆ ಮೂಲ ಭೂತ ಶಿಕ್ಷಣದ ಬಗೆಗಿನ ಕಾಂಗ್ರೆಸ್‍ನ ರಾಷ್ಟ್ರೀಯ ಶಿಕ್ಷಣ ಪರಿಕಲ್ಪನೆಯನ್ನು ರಾಜಾಜಿ ಒಪ್ಪಿಕೊಂಡರು. ಆದರೆ ಅದರಲ್ಲಿ ಗುರುಕುಲ ಶಿಕ್ಷಣ ಪದ್ಧತಿಯನ್ನು ಅಳವಡಿಸಲು ಯತ್ನಿಸಿದರು. ಆದರೆ ಇದು ಅಷ್ಟಾಗಿ ಪರಿಣಾಮ ಬೀರಲಿಲ್ಲ. ಆರಂಭದಲ್ಲಿ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಒಪ್ಪಬೇಕೆಂದು ರಾಜಾಜಿಯವರು ಒತ್ತಾಯಿಸಿದರು. ಆದರೆ ಕ್ರಮೇಣ ಹಿಂದಿಯ ದುರಭಿಮಾನದ ದುಷ್ಪರಿಣಾಮಗಳ ಅರಿವಾಗತೊಡಗಿ ಇಂಗ್ಲಿಷನ್ನು ಭಾರತದ ಸಂಪರ್ಕ ಭಾಷೆಯಾಗಿ ಬಳಸಲು ಪ್ರತಿಪಾದಿಸಲಾರಂಭಿಸಿದರು. ರಾಜಾಜಿ ಮಾತೃಭಾಷಾಭಿಮಾನಿ. `ಬೋಧನೆ ಮಾತೃಭಾಷೆಯೇ ಸರ್ವಶ್ರೇಷ್ಠ. ಅದು ವಿದ್ಯಾರ್ಥಿಯ ಗ್ರಹಣಸಾಮಥ್ರ್ಯವನ್ನು ಮತ್ತು ಅಭಿವ್ಯಕ್ತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಿತ್ತರಗೊಳಿಸುತ್ತದೆ ಎಂದು ಹೇಳಿದ್ದಾರೆ.

ರಾಜಾಜಿ ದಕ್ಷ ಆಡಳಿತಗಾರರು. ದೂರದೃಷ್ಟಿಯುಳ್ಳವರು. ರಷ್ಯ ಮತ್ತು ಚೀನಗಳು ಎರಡನೆಯ ಮಹಾಯುದ್ಧದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ತರುವಾಯ ಮಹಾನ್ ಶಕ್ತಿಶಾಲಿಗಳಾಗುತ್ತವೆಂದು 1943 ರಲ್ಲೇ ಹೇಳಿದ್ದರು. ಭಾರತ ಸ್ವಾತಂತ್ರ್ಯ ಪಡೆಯಬೇಕಾದರೆ ಅನಿವಾರ್ಯವಾಗಿ ಮುಸ್ಲಿಮರೊಡನೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ ಎಂದೂ ಹೇಳಿದ್ದರು. ಮುಸ್ಲಿಮರು ಸಂಯುಕ್ತ ಭಾರತದಲ್ಲಿರುವ ಅಥವಾ ಪ್ರತ್ಯೇಕ ಘಟಕಗಳಾಗಿ ಸಂಯುಕ್ತ ಭಾರತದಲ್ಲಿರುವ ಅಥವಾ ಪ್ರತ್ಯೇಕ ಸಾರ್ವಭೌಮ ರಾಜ್ಯಗಳಲ್ಲಿರುವ ಆಯ್ಕೆಯನ್ನು ಇವರು ಸೂಚಿಸಿದ್ದರು. ಇದು `ಸಿ.ಆರ್.ಸೂತ್ರ ವೆಂದು ಪ್ರಸಿದ್ಧವಾಗಿದೆ. ಆದರೆ ದುರದೃಷ್ಟಾವಶಾತ್ ಮುಸ್ಲಿಂ ನಾಯಕ ಜಿನ್ನಾ ಈ ಸೂತ್ರವನ್ನು ಒಪ್ಪಲಿಲ್ಲ. ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಧೋರಣೆಗೆ ಬೇಸತ್ತು ಇವರು ರಾಜೀನಾಮೆ ನೀಡಿ ಕಾಂಗ್ರೆಸ್‍ನಿಂದ ಹೊರಬಂದರು. ರಾಷ್ಟ್ರೀಯ ಸರ್ಕಾರದ ಅಗತ್ಯವನ್ನು ಮನಗಂಡ ರಾಜಾಜಿ ಕ್ರಿಪ್ಸ್ ಅನುಮೋದನೆಗಳನ್ನು ಕಾಂಗ್ರೆಸ್ ನಿರಾಕರಿಸಿದಾಗ ಉಗ್ರವಾಗಿ ಟೀಕಿಸಿದರು. ಭಾರತ ಬಿಟ್ಟು ತೊಲಗಿ ಚಳುವಳಿಯಲ್ಲಿ ರಾಜಾಜಿ ಭಾಗವಹಿಸಲಿಲ್ಲ. ಎರಡನೆಯ ಮಹಾಯುದ್ಧದಲ್ಲಿ ಬ್ರಿಟನ್ ಗೆದ್ದು ಪ್ರಜಾಪ್ರಭುತ್ವ ಸರ್ಕಾರ ಭಾರತದಲ್ಲಿ ಸ್ಥಾಪನೆಯಾಗುತ್ತದೆ ಎಂದು ಆಶಯವನ್ನು ಇವರು ಹೊಂದಿದ್ದರು.

ರಾಜಾಜಿ ಉನ್ನತ ಸ್ಥಾನಕ್ಕೇರಿದ್ದು ತಮ್ಮ ತ್ಯಾಗ ಮತ್ತು ಯಶಸ್ವಿ ಕಾರ್ಯನಿರ್ವಹಣೆಗಳಿಂದ. ಆರಂಭದಲ್ಲಿ ಇವರು ಸೇಲಂ ನಗರಪಾಲಿಕೆಯ ಅಧ್ಯಕ್ಷರಾಗಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಪಾನವಿರೋಧಿ ಚಳುವಳಿಯ ಸದಸ್ಯರಾಗಿದ್ದರು. ಪಾನನಿರೋಧ ಇವರ ಬದುಕಿನ `ಬದ್ದತೆ ಯಾಗಿತ್ತು. ಪಾನ ನಿರೋಧದ ಬಗ್ಗೆ ಅಸಂಖ್ಯಾತ ಕರಪತ್ರಗಳನ್ನು ಹಂಚಿದರು ಹಾಗೂ ಶಿಬಿರಗಳನ್ನು ನಡೆಸಿದರು. 1937 ರಲ್ಲಿ ಮದರಾಸಿನಲ್ಲಿ ಪಾನನಿಷೇಧವನ್ನು ಜಾರಿಗೆ ತಂದು ಕಡೆಯವರೆಗೂ ತಮ್ಮ ತೀರ್ಮಾನಕ್ಕೆ ಬದ್ಧರಾಗಿದ್ದರು. ರಾಜಾಜಿ ದಕ್ಷಿಣ ಭಾರತದಲ್ಲಿ ಕಾನೂನುಭಂಗ ಚಳವಳಿಯ ಮಂಚೂಣಿ ನಾಯಕರಾಗಿದ್ದರು. 1926-29 ರ ಅವಧಿಯಲ್ಲಿ ತಿರುಚೆನ್ನೆಗೋಡಿನಲ್ಲಿ ಆಶ್ರಮವೊಂದನ್ನು ಸ್ಥಾಪಿಸಿದರು; ತರುವಾಯ ಇದು ಖಾದಿ ಉತ್ಪಾದನೆಯ ಪ್ರಮುಖ ಕೇಂದ್ರವಾಯಿತು. ಈ ಆಶ್ರಮ ಹಳ್ಳಿಗರ ಬದುಕಿನ ಅಭಿವೃದ್ಧಿಗಾಗಿ, ಜಾತೀಯತೆಯ ನಿರ್ಮೂಲನೆಗಾಗಿ ಶ್ರಮಿಸಿತು. ಹಳ್ಳಿಗರ ಶ್ರೇಯೋಭಿವೃದ್ಧಿಗಾಗಿಯೇ ವಿಮೋಚನಂ ಎಂಬ ತಮಿಳು ಪತ್ರಿಕೆಯನ್ನು ಆರಂಭಿಸಿದರು.
ರಾಜಾಜಿ ವೇದಾರಣ್ಯಂನಲ್ಲಿ ಆರಂಭಿಸಿದ ಉಪ್ಪಿನ ಸತ್ಯಾಗ್ರಹ ತಮಿಳು ನಾಡಿನಾದ್ಯಂತ ಜಾಗೃತಿಯನ್ನುಂಟುಮಾಡಿತು. ಇವರು 1921-22 ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‍ನ ಮಹಾಕಾರ್ಯದರ್ಶಿಯಾಗಿದ್ದರು. ಅನೇಕ ವರ್ಷಗಳ ಕಾಲ ಕಾಂಗ್ರೆಸ್‍ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ತಮಿಳುನಾಡಿನ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅನೇಕ ವರ್ಷ ಸೇವೆ ಸಲ್ಲಿಸಿದರು. ಮದರಾಸು ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದ ರಾಜಾಜಿ (1937-39) ಮಹಾ ಯುದ್ಧಕ್ಕೆ ಕಾಂಗ್ರೆಸ್ ಸಹಕರಿಸದೇ ಅಸಹಕಾರ ಚಳುವಳಿಯನ್ನು ಬೆಂಬಲಿಸಿದ್ದರಿಂದ ಬೇಸತ್ತು ಮುಖ್ಯಮಂತ್ರಿ ಪದವಿಯನ್ನು ತ್ಯಜಿಸಿದರು.

1946-47 ರಲ್ಲಿ ಗವರ್ನರ್ ಜನರಲ್‍ನ ಕಾರ್ಯನಿರ್ವಹಣಾ ಸಮಿತಿಯ ಸದಸ್ಯರಾಗಿದ್ದ ರಾಜಾಜಿ 1947ರ ಆಗಸ್ಟ್‍ನಿಂದ ನವೆಂಬರ್‍ವರೆಗೆ ಪಶ್ಚಿಮ ಬಂಗಾಲದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ನವೆಂಬರ್ 1947ರಲ್ಲಿ ಗವರ್ನರ್ ಜನರಲ್ ಆಗಿ ಔಪಚಾರಿಕವಾಗಿ ನೇಮಕವಾದ ಇವರು ತರುವಾಯ 1948-50ರ ವರೆಗೆ ಈ ಹುದ್ದೆಯನ್ನು ನಿರ್ವಹಿಸಿದರು. ಅನಂತರ ಮೇಯಿಂದ ಡಿಸೆಂಬರ್ 1950 ರ ವರೆಗೆ ಜನಾದೇಶ ಪಡೆಯದೆಯೇ ಕೆಂದ್ರ ಸರ್ಕಾರದ ಮಂತ್ರಿ ಆಗಬೇಕಾಯಿತು. 1951 ರಲ್ಲಿ ಗೃಹಖಾತೆಯ ಸಚಿವರಾಗಿ ಕಾರ್ಯನಿರ್ವಹಿಸಿದರು. ಮದರಾಸು ವಿಧಾನ ಸಭೆಯಲ್ಲಿ ಕಾಂಗ್ರೆಸ್ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದಾಗ ಪಕ್ಷ ನಡೆಸಲು ಮತ್ತೆ ರಾಜಾಜಿಯವರನ್ನು ಆಹ್ವಾನಿಸಲಾಯಿತು. 1952-54ರ ಅವಧಿಗೆ ಮತ್ತೊಮ್ಮೆ ಮದರಾಸಿನ ಮುಖ್ಯಮಂತ್ರಿಯಾಗಿದ್ದರು. ಅನಂತರ ನಿಧಾನವಾಗಿ ಕಾಂಗ್ರೆಸ್‍ನಿಂದ ದೂರ ಸರಿದು ರಾಜಾಜಿ `ಸ್ವತಂತ್ರಪಕ್ಷದ ಸಂಸ್ಥಾಪಕರಾದರು.

ರಾಜಾಜಿ ಮಹಾನ್ ವಾಗ್ಮಿ. ಎಂಥ ಕಠಿಣ ವಿಷಯವನ್ನೂ ಸರಳ ಶೈಲಿಯಲ್ಲಿ ಮನಮುಟ್ಟುವಂತೆ ವಿವರಿಸುವ ಕುಶಲತೆ ಇವರಲ್ಲಿತ್ತು. ಇವರು ತಮಿಳು ಮತ್ತು ಇಂಗ್ಲಿಷ್ ಭಾಷೆಗಳ ಶ್ರೇಷ್ಠ ಬರೆಹಗಾರರೂ ಹೌದು. ಅಸಂಖ್ಯಾತ ವಿದ್ವತ್ಪೂರ್ಣ ಉಪನ್ಯಾಸಗಳನ್ನು ಸ್ವಾತಂತ್ರ್ಯ ಸಂಗ್ರಾಮ ಕಾಲದಲ್ಲೂ ತರುವಾಯದಲ್ಲೂ ನೀಡಿದರು. ಆಧುನಿಕ ತಮಿಳು ಸಾಹಿತ್ಯದಲ್ಲಿ ಇವರ ಸಣ್ಣಕಥೆಗಳಿಗೆ ವಿಶಿಷ್ಟ ಸ್ಥಾನವಿದೆ. ಭಾರತ ಮತ್ತು ರಾಮಾಯಣ (ಚಕ್ರವರ್ತಿ ಮಗನ್) ಕೃತಿಗಳನ್ನು ಈ ಮಹಾಕಾವ್ಯಗಳ ನಿಜ ಸ್ವರೂಪವನ್ನು ತಿಳಿಸುವುದಕ್ಕಾಗಿ ತಮಿಳಿನಲ್ಲಿ ರಚಿಸಿದರು. ತಮಿಳಿನಲ್ಲಿ ರಚಿತವಾದ ಇವರ `ಮಹಾಭಾರತ ಕೃತಿ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಪಡೆದಿದೆ. ರಾಮಕೃಷ್ಣ ಉಪನಿಷತ್ ಎಂಬ ಇವರ ಕೃತಿಗೆ ಮದರಾಸು ಸರ್ಕಾರದ ಪ್ರಶಸ್ತಿ ದೊರಕಿದೆ. ಇಂಗ್ಲಿಷ್‍ನಲ್ಲಿ ರಚಿತವಾಗಿರುವ ಇವರ ರಾಮಾಯಣ ಹಾಗೂ ಮಹಾಭಾರತ ಕೃತಿಗಳು ಜಗತ್ತಿನಾದ್ಯಂತ ಅನೇಕ ಭಾಷೆಗಳಿಗೆ ತರ್ಜುಮೆಗೊಂಡಿವೆ. ವೈe್ಞÁನಿಕ ವಿಚಾರದ ನೆಲೆಯಲ್ಲಿ ಮುನ್ಸೂಚನೆಗಳನ್ನು ನುಡಿಯಲು ಸಾಧ್ಯವಿದೆ ಎಂಬುದನ್ನು ತೋರಿಸುವುದಕ್ಕಾಗಿ ಮುಡಿಯುಮಾ? ಎಂಬ ವೈe್ಞÁನಿಕ ಗ್ರಂಥವನ್ನು ತಮಿಳಿನಲ್ಲಿ ರಚಿಸಿದ್ದಾರೆ. ಸಂಸ್ಕøತ ಮತ್ತು ತಮಿಳುಭಾಷೆಗಳಲ್ಲಿ ವಿದ್ವತ್ತಿದೆ ಎಂದು ರಾಜಾಜಿ ಹೇಳಿಕೊಳ್ಳದಿದ್ದರೂ ತಿರುಮಂತ್ರಮ್, ಕಂಬರಾಮಾಯಣ, ಆಳ್ವಾರ್ ಗೀತೆಗಳು, ಉಪನಿಷತ್‍ಗಳು ಹಾಗೂ ತೊಲ್‍ಕಾಪ್ಪಿಯಂ-ಕೃತಿಗಳ ಮೇಲಿನ ಇವರ ಅಗಾಧ ಪಾಂಡಿತ್ಯ ತಮಿಳು ಮತ್ತು ಸಂಸ್ಕøತದ ಮೇಲಿನ ಪ್ರಭುತ್ವವನ್ನು ತೋರಿಸುತ್ತದೆ.

ರಾಜಾಜಿಯವರದು ಮೇರು ವ್ಯಕ್ತಿತ್ವ. ಸರಳ ಸಂಪನ್ನರು. ಶುಭ್ರ ಬಿಳಿ ಜುಬ್ಬಾ, ದೋತಿ ಉಡುಗೆಯಲ್ಲಿ ಸದಾ ಕಾಣಿಸಿಕೊಳ್ಳುತ್ತಿದ್ದ ಇವರ ಮುಖದಲ್ಲಿ ಎಲ್ಲರನ್ನೂ ಆಕರ್ಷಿಸುವ ಮಂದಹಾಸವಿರುತ್ತಿತ್ತು. ರಾಜಾಜಿ 1972 ರಲ್ಲಿ ನಿಧನರಾದರು. ಇವರ ಆಡಳಿತ, ರಾಜಕೀಯ ದಕ್ಷತೆ, ಸಾಹಿತ್ಯ ಸೇವೆ, ಸಾಮಾಜಿಕ ಕೆಲಸಕಾರ್ಯಗಳನ್ನು ಗುರುತಿಸಿ ಭಾರತ ಸರ್ಕಾರ 1954ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.							
(ಎಸ್.ಆರ್.ಐ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ